1397-1439. ಆಸ್ಟ್ರಿಯದ ಡ್ಯೂಕ್ ಆಲ್ಬರ್ಟ್ Iಗಿನ ಮಗ. ತಂದೆ 1404ರಲ್ಲಿ ಕಾಲವಾದ. ಅನಂತರ ಏಳುವರ್ಷ ಕಾಲ ರಾಜಪ್ರತಿನಿಧಿ ಅಥವಾ ರೀಜೆಂಟ್ ಆಗಿ ರಾಜ್ಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲೆ ರಾಜಕಾರ್ಯದಲ್ಲಿ ಭಾಗವಹಿಸತೊಡಗಿ ಅನೇಕ ಆರ್ಥಿಕ ಮತ್ತು ಸೈನಿಕ ಸುಧಾರಣೆಗಳನ್ನು ಜಾರಿಗೆ ತಂದ. ಜರ್ಮನಿಯ ದೊರೆ ಸಿಜಿಸ್ಮಂಡ್ ಕಾಲವಾದಮೇಲೆ ಅವನ ಅಳಿಯನಾಗಿದ್ದ ಇವನನ್ನು ಜರ್ಮನಿ, ಹಂಗೆರಿ ಮತ್ತು ಬೊಹಿಮಿಯ ರಾಜ್ಯಗಳ ದೊರೆಯನ್ನಾಗಿ ಆರಿಸಿದರು (1438). ಈ ರಾಜ್ಯಗಳ ಏಳಿಗೆಗೂ ನಿರ್ದಿಷ್ಟವಾದ ರಾಜಕೀಯ ಧೋರಣೆ ಮತ್ತು ಯೋಜನೆಗಳನ್ನು ರೂಪಿಸಿಕೊಂಡಿದ್ದ. ಇವನಿಂದ ಹ್ಯಾಪ್ಸ್ಬರ್ಗ್ ಮನೆತನದ ಆಡಳಿತ ಪ್ರಾರಂಭವಾಯಿತು.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ